ಕನ್ನಡ ನಾಡು | Kannada Naadu

 ನ.15ರಿಂದ ಉಡುಪಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ನೊಂದಣಿ ಆರಂಭ

09 Nov, 2024


ಉಡುಪಿ : ಕೇಂದ್ರ ಸರಕಾರವು ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಸಾಮಾನ್ಯ ದರ ಕ್ವಿಂಟಾಲ್‌ಗೆ 2300 ರೂ. ಹಾಗೂ ಭತ್ತ ಗ್ರೇಡ್ ‘ಎ’ಗೆ 2320 ರೂ. ನಿಗದಿಪಡಿಸಿದೆ. ಜಿಲ್ಲೆಯ ರೈತರಿಂದ ಭತ್ತವನ್ನು ನಿಯಮಾನುಸಾರ ಖರೀದಿಸಲು ಮತ್ತು ರೈತರಿಗೆ ನೊಂದಣಿ ಕೇಂದ್ರಗಳನ್ನು ತೆರೆದು ನೊಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭತ್ತವನ್ನು ಖರೀದಿಸಲು ಕರ್ನಾಟಕ ಆಹಾರ ನಿಗಮ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಈ ಖರೀದಿ ಏಜೆನ್ಸಿಯವರು ರೈತರಿಂದ ಭತ್ತದ ನೊಂದಣಿ ಪ್ರಕ್ರಿಯೆಯನ್ನು ನವೆಂಬರ್ 15ರಿಂದ ಡಿಸೆಂಬರ್ 31ರವರೆಗೆ ನಡೆಸಲಿದ್ದಾರೆ. ಬಳಿಕ 2025ರ ಜನವರಿ 1ರಿಂದ ಮಾರ್ಚ್ 31ರ ಅವಧಿಯೊಳಗೆ ರೈತರಿಂದ ಭತ್ತವನ್ನು ಖರೀದಿಸುವ ಪ್ರಕ್ರಿಯೆ ಯನ್ನು ಕೈಗೊಳ್ಳಲಾಗುವುದು.  

 ಜಿಲ್ಲೆಯ ನೊಂದಣಿ/ಖರೀದಿ ಕೇಂದ್ರಗಳ ವಿವರ:
ಉಡುಪಿ ಎ.ಪಿ.ಎಂ.ಸಿ ಯಾರ್ಡ್‌ನ ಕೆ.ಎಫ್.ಸಿ.ಎಸ್.ಸಿ ಗೋದಾಮು, ಕುಂದಾಪುರ ಕೋಟೇಶ್ವರದ ಕೆ.ಎಫ್.ಸಿ.ಎಸ್.ಸಿ ಗೋದಾಮು ಹಾಗೂ ಕಾರ್ಕಳ ಎ.ಪಿ.ಎಂ.ಸಿ ಯಾರ್ಡ್‌ನ ಕೆ.ಎಫ್.ಸಿ.ಎಸ್.ಸಿ ಗೋದಾಮು ಇಲ್ಲಿ ಭತ್ತದ ನೊಂದಣಿ/ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.   ಜಿಲ್ಲೆಯಲ್ಲಿ ಭತ್ತ ಬೆಳೆದಿರುವ ರೈತರು ಕೃಷಿ ಇಲಾಖೆಯಿಂದ ನೀಡಿರುವ ಫ್ರುಟ್ಸ್ ದತ್ತಾಂಶದಲ್ಲಿ ಸೇರ್ಪಡೆ ಮಾಡಿಕೊಂಡು ಹಾಗೂ ಈ ಬಗ್ಗೆ ಫ್ರುಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಯ ಮಾಹಿತಿ ಯೊಂದಿಗೆ ನೊಂದಣಿ ಕೇಂದ್ರಕ್ಕೆ ಬಂದು ನೊಂದಣಿ ಮಾಡಿಸಿಕೊಳ್ಳಬಹುದು. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 
    

Publisher: ಕನ್ನಡ ನಾಡು | Kannada Naadu

Login to Give your comment
Powered by